ಮತ್ತಿನ ಮಾಂತ್ರಿಕ
ಜೋಗಿ ಅವರ 'ಬೆಂಗಳೂರು'.
ಅಲ್ಲ, ಈ ಜೋಗಿ ಅವರ ಕಾದಂಬರಿ ಬೆಂಗಳೂರಿನ ಬಗ್ಗೆ ಅಲ್ಲ. ಬೆಂಗಳೂರಿನ ಜನಜಂಗುಳಿ, ರಸ್ತೆ ಅವ್ಯವಸ್ಥೆ, ಸಾರಿಗೆ ಅವಾಂತರ, ಕಸ ಕಲ್ಮಷ , ಜೀವನ ಶೈಲಿ, ದುಷ್ಟರಾಜಕೀಯ ಊಹುಂ, ಇವುಗಳಬಗ್ಗೆ ಅಲ್ಲವೇಅಲ್ಲ. ಇಲ್ಲಿ ಬೆಂಗಳೂರು ಜೀವನದ ಒಂದು ವಿದ್ರಾವಕ ಭಾಗದ ಸಂಕೇತ. ಅದಮ್ಯ ತುಡಿತಗಳ, ರೋಷ ಕ್ರೌರ್ಯಗಳ ಅಭಿವ್ಯಕ್ತಿಯ ತಾಣ.
ಪ್ರಾರಂಭದಲ್ಲೇ ಈ ಕಾದಂಬರಿಯ ನಾಯಕ, ಕ್ರೈಮ್ ರಿಪೋರ್ಟ, ತನ್ನ ಹೆಂಡತಿಯನ್ನು ಕೊಂದು ಪೋಲೀಸ್ಗೆ ಅದನ್ನು ಫೋನಿನಲ್ಲಿ ತಿಳಿಸಿ ಅವರಿಗಾಗಿ ಕಾಯುತ್ತಿರುತ್ತಾನೆ. ಕಾದಂಬರಿ ಮುಗಿದಾಗಲೂ ಪೋಲೀಸರ ಬರವಿಗೆ ಕಾಯುತ್ತಾ ನಿದ್ದೆಹೋಗುತ್ತಾನೆ. ಇವೆರಡರ ಮಧ್ಯೆ ಕತೆ ಸಾಗುತ್ತದೆ. ಸಧ್ಯದ ಸ್ತಿತಿಯಿಂದ ನಾಯಕನ ಬಾಲ್ಯಕ್ಕೆ ಕರಕೊಂಡು ಹೋಗುತ್ತಾರೆ, ಮತ್ತೆ ಸಧ್ಯಕ್ಕೆ ಬರುತ್ತಾರೆ, ಮತ್ತೆ ಬಾಲ್ಯಕ್ಕೆ ಮರಳುತ್ತಾರೆ, ಒಮ್ಮೊಮ್ಮೆ ಎರಡೂ ಒಟ್ಟೊಟ್ಟಿಗೇ ನಡೆಯುತ್ತದೆ; ಸಧ್ಯವೇ ಬಾಲ್ಯದ ಸ್ಥಳಗಳಿಗೆ ಹೋಗಿಬರುತ್ತವೆ.. ಈ ಚಲನೆ ಒಂದು ನಾಟ್ಯ, ಭೀಭತ್ಸ ಅಭಿವ್ಯಕ್ತಿಯ ನೃತ್ಯ.
ಅಪ್ಪನಿಗೆ ಇನ್ಯಾವುದೋ ಹೆಂಗಸಿನ ಸಂಘ, ನಂತರ ಅದರ ಭಂಗ, ಅಮ್ಮ ಇನ್ಯಾರಲ್ಲೋ ಅನುರಕ್ತೆ ಮತ್ತು ಅದರಿಂದ ಕ್ರಮೇಣ ದೂರ, ಅಕ್ಕ ಮಾಸ್ತರೊಡನೆ ಸಂಬಂಧ, ಅದರ ಅವಸಾನವಾಗಿ ಬೆಂಗಳೂರು ಸೇರಿ ವೇಶ್ಯೆಯಾಗುವುದು, ಕಡುಬಡತನ, ಇವರೆಲ್ಲರ ಮೇಲೆ ಸಮಾಜದ ತಾತ್ಸಾರ, ಇವೆಲ್ಲವನ್ನೂ ನೋಡುತ್ತಾ ಬೆಳೆದ ನಾಯಕನ ಬಾಲ್ಯ ಮತ್ತು ಅವಕ್ಕೆ ಬೇಸತ್ತ ರೋಷ, ಕ್ರೌರ್ಯದ ನಿರಂತರ ಉಮ್ಮಳಿಕೆ, ಅಸಹಾಯಕತೆಯ ಉದ್ವಿಗ್ನತೆಯಲ್ಲಿ ರಾತ್ರಿ ಹಗಲೂ ಕಳೆಯುವುದು ನಮ್ಮ ಕಣ್ಣು ಕಟ್ಟುತ್ತದೆ, ಹೃದಯ ಮಿಡಿಯುತ್ತದೆ. ಹಿಂದಾದರೆ ಈತ 'ದಾರಿ ತಪ್ಪಿದ ಮಗ' ನಾಗುತ್ತಿದ್ದ ಆದರೆ ಈಗ ಈ ಬೆಂಗಳೂರು ಸೇರಿ ರಹದಾರಿಯ ಸರದಾರ, ಮಾನ ಸಮ್ಮಾನಗಳ ಬಹಾದ್ದೂರನಾಗುತ್ತಾನೆ. ಬದುಕು ಮಾದಕತೆ, ಪ್ರಭುತ್ವ, ಜಯಭೇರಿ ಬಯಸುತ್ತಿರುತ್ತದೆ ಅಂತ ಹೇಳಿದ್ದಾರೆ. ಈ ಬೆಂಗಳೂರಿನಲ್ಲಿ ಅದನ್ನು ನಮ್ಮ ನಾಯಕ ಪಡೆಯುತ್ತಾನೆ, ಅವನ ರೋಷ ಕ್ರೌರ್ಯಕ್ಕೂ ಈ ಬೆಂಗಳೂರಿನಲ್ಲಿ ದಾರಿ ಸಿಗುತ್ತದೆ. ಅದಕ್ಕೆ ಮಾನ ಸಮ್ಮಾನಗಳೂ ದೊರಕುತ್ತದೆ. ಇದೇ ಬೆಂಗಳೂರಿನ ರಹಸ್ಯ!
ಇಂತಹ ಸಂಕೀರ್ಣ, ಸೂಕ್ಷ್ಮ ಹಾಗೂ ನೇತ್ಯಾತ್ಮಕ ಅನುಭವಗಳನ್ನು ಅತ್ಯಂತ ಸರಳ ಭಾಷೆ, ಪದಗಳಲ್ಲಿ ಹಿಡಿದು ನಮ್ಮ ಮುಂದೆ ನೇತುಹಾಕಿದ್ದಾರೆ ಜೋಗಿ. ವೇಗದಿಂದ ಓದಿಸಿಕೊಳ್ಳುತ್ತದೆ ಈ ಕಾದಂಬರಿ. ಅದೆಂತಹ ಪ್ರತಿಭೆ ಜೋಗಿಯವರದು, ಅದ್ಭುತ. ಇವರಲ್ಲಿನ ಸೃಜನ ಉತ್ಪಾದನಶೀಲತೆ ಬೆರಗುಗೊಳಿಸುವಂತಹದು.
ಈ ಬೆಂಗಳೂರು ಅವರಿಂದ ಇನ್ನೂ ಐದು ಆರು ಕಾದಂಬರಿಯನ್ನು ತರುತ್ತಿದೆ ಅಂತ ಅವ್ರೆ ಹೇಳಿದ್ದಾರೆ. ಈ ಕಾದಂಬರಿಗೆ ಎಂಟು ವರ್ಷ ತೆಗೆದುಕೊಂಡಿದ್ದೇನೆ ಅಂದಿದ್ದಾರೆ. ಇನ್ನು ಉಳಿದಿದ್ದಕ್ಕೆ ೫x ೮=೪೦ ವರ್ಷ ತೆಗೆದುಕೊಳ್ಳದಿರಲಿ, ವರ್ಷಕ್ಕೆ ಒಂದೋ ಎರಡರಂತೆ ಬರಲಿ, ನಾವು ಮುದದಿಂದ ಕಾಯುತ್ತಿರುತ್ತೇವೆ. ಈಗಾಗಲೇ ಈ 'ಬೆಂಗಳೂರು' ನಮ್ಮ ಬೆಚ್ಚಿಬೀಳಿಸಿದೆ!
No comments:
Post a Comment