Wednesday, June 29, 2016

Jogi's New Play

ಜೋಗಿ ಅವರ 

ವಿಶ್ವಾಮಿತ್ರ ಮೇನಕೆ ಡ್ಯಾನ್ಸ್ ಮಾಡೋದು ಏನಕೆ Ask Mr. YNK - a melodrama...

ನಾಟಕ ನೋಡಲು ಚಂದ, ಒದಲಿಕ್ಕಲ್ಲ ಎಂಬ ಮಾತಿದೆ. ಆದರೆ, ಕೆಲವು ನಾಟಕ ನೋಡಲೂ ಚಂದ ಓದಲೂ ಚಂದ, ಜೋಗಿ ಅವರ ಈ ನಾಟಕ ಈ ಸಾಲಿಗೆ ಸೇರಿದ್ದು. 

ನಾಟಕ ಹರ್ಷಭರಿತವಾಗಿದೆ, ದಾರುಣತೆ ಮಡಿಲಿನಲ್ಲಿದೆ. ಇದರಲ್ಲಿ ಕಥೆ ಅಂತೇನು ಇಲ್ಲ, ಅಂದರೆ ಹುಟ್ಟು, ಸಾವು, ಅವಸಾನ ಗಳೇನು ಇಲ್ಲ. ಬದುಕಿನ ಒಂದು ಸ್ಥಿತ್ಯಂತರದ ದಟ್ಟ ಗೋಚರವೇ ಇದರ ಜೀವಾಳ. ಇದರಲ್ಲಿ ಅತ್ಯಂತ ಯಶಸ್ಸು ಸಾಧಿಸಿದ್ದಾರೆ ಜೋಗಿ. 

ಇದು ಒಂದು ದಾಂಪತ್ಯ ಕತೆ. ಮೂರು ಸ್ಥಿತಿ. ಮದುವೆಯೇ ಬೇಡವೆಂತಿದ್ದ ೪೦ರ  'ಘಾ' ನೆರೆಯವ ಅಸುಖದಲ್ಲು ಸುಖ ಇದೆ ಎಂದು ಹೇಳಿದ್ದ ಕೇಳಿ ಮದುವೆಗೆ ಚಟಪಡಿಸುತ್ತಾನೆ. ೨೦ ವರ್ಷ ಕಳೆದ 'ವಿಶ್ವಾಮಿತ್ರ- ಮೇನಕೆ' ದಾಂಪತ್ಯದ ಎಂದಿನ ಜಗಳ ಸಾಕಾಗಿ ಸರ್ಕಾರದ 'ದಾಂಪತ್ಯ ನಿರ್ಮೂಲನ  ಇಲಾಖೆ' ಗೆ ಅರ್ಜಿಹಾಕಿ ಪಡೆದುಕೊಳ್ಳುತ್ತದೆ.  ಮುಸುಕಿನನಲ್ಲಿ ಫೋನಿನ ಪ್ರಣಯ ಕೇಳಿಯಲ್ಲಿರುವ 'ಶಕುಂತಲೆ' ಯನ್ನು ಮರೆತ 'ದುಷ್ಯಂತ' ಅವಳ ಒತ್ತಾಯದಲ್ಲೇ ಮಾತು ಮುಗಿಸುತ್ತಾನೆ. 

ಘಾ ಗುಂಡು ಪ್ರಿಯ, ಏಣಿಯ ಅರ್ಧಕ್ಕೆ ಹತ್ತಿ ಕುಳಿತಿರುವುದೇ ಇವನ ಸ್ಥಾನ. ರಾಶಿ ಫೋನು, ಕುರ್ಚಿ ಮೇಜುಗಳ ಮಧ್ಯೆ ಇರುವವರು ವಿಶ್ವಾಮಿತ್ರ ಮೇನಕೆ. ದಾಂಪತ್ಯ ನಿರ್ಮೂಲನ ಇಲಾಖೆಯ ಮೊದಲನೇ ಕೇಸು ನಿರ್ಮೂಲನೆ ಪರವಾಗಿಯೇ ಇರಬೇಕು, ಆಗಲೇ ಈ ಇಲಾಖೆ ತೆರೆದಿದ್ದಕ್ಕೆ ಗೌರವ ಎಂದು ಹಠ ಹಿಡಿದಿರುವ ಅಧಿಕಾರಿ. ಕಡೆಯಲ್ಲಿ ಮುಸುಕಿನ ಪ್ರಣಯನಿರತ ಶಕುಂತಲೆಯ ಹಾಸಿಗೆ.  ಇದು ಒಟ್ಟಾರೆಯ ರಂಗ ಮಂಚ. 

ನಾಟಕದ ಕೊನೆಯಲ್ಲಿ ಈ ನಮ್ಮ ವಿಶ್ವಾಮಿತ್ರ ಮೇನಕೆಯವರು ಅವರವರಿಗೆ ಪ್ರತ್ಯೇಕವಾದ ವರ್ತುಲಾಕಾರದ ಬೆಳಕಿನಲ್ಲಿ ದಾಂಪತ್ಯ ನಿರ್ಮೂಲನ ಇಲಾಖೆ ಕೊಟ್ಟಿರುವ ಪರವಾನಿಗೆ ಪತ್ರವನ್ನು ಕೈಯಲ್ಲಿ ಹಿಡಿದು ತಿರುಗಿಸುತ್ತಾ ನಾಟ್ಯ ವಾಡುತ್ತಾರೆ. ಈಗ ಗೊತ್ತಾಯಿತಾ ವಿಶ್ವಾಮಿತ್ರ ಮೇನಕೆ ಡ್ಯಾನ್ಸ್ ಮಾಡೋದು ಏನಕೆ ಅಂತ?!

ಶುಷ್ಕ ಬದುಕಿನ ಪ್ರಭಾವಶಾಲಿ ನಿರೂಪಣೆ ಈ ನಾಟಕ.  ಕಾಫ್ಕ ನ ಅಸಂಗತ (Absurd) ಸಾಹಿತ್ಯದ ನೆನಪು ತರುತ್ತದೆ. ಆದರೆ ಇಲ್ಲಿ ಉದ್ದಕ್ಕೂ ಬರುವ ದಾರುಣತೆಯ ಸಾಂದ್ರತೆ ಅಸಂಗತೆಯನ್ನು ಮೀರಿ ಹೋಗುತ್ತದೆ.

 ನಾಟಕದ ಉದ್ದಕ್ಕೂ ವೈಎನ್ಕೆ ನುಡಿಗಳಿವೆ, ​ಈ ಕೃತಿಯೇ ಅವರಿಗೆ ಅರ್ಪಣೆಯಾಗಿದೆ. 


ಜೋಗಿಯವರು ಒಂದು ಹರ್ಷೋಲ್ಲಾಸದ ಹಾಸ್ಯಭರಿತ ನಾಟಕವನ್ನು ನಮಗೆ ಕೊಟ್ಟಿದ್ದಾರೆ. ಬರಡಾದ ಅಂತರಂಗದ ಬದುಕನ್ನು ಅದೆಷ್ಟು ಸೊಗಸಾಗಿ, ಸೃಜನಶೀಲತೆಯಿಂದ ಶಿಲ್ಪಿಸಿ ನಮ್ಮ ಮುಂದಿಟ್ಟಿದ್ದಾರೆ. ಓದಲು, ನೋಡಲು ಅತ್ಯಂತ ಯೋಗ್ಯ ಹಾಗೂ ಸೂಕ್ತ. ವಂದನೆಗಳು, ಅಭಿನಂದನೆಗಳು ಜೋಗಿ ಅವರೇ. 




No comments: