Sunday, August 14, 2016

Love, Bondage and Freedom: Sahana Vijayakumar's Novel: Kshame

ಪ್ರೇಮ, ಬಂಧನ ಮತ್ತು ಬಿಡುಗಡೆ 

ಸಹನಾ ವಿಜಯಕುಮಾರ್ ಅವರ ಕಾದಂಬರಿ: ಕ್ಷಮೆ. 


ಸ್ವಾತಂತ್ರ್ಯ, ಸ್ವೇಚ್ಛೆ ಮತ್ತು ಸಮರ್ಥನೆಗಳನ್ನು ಅತ್ಯಂತ ವಾಸ್ತವದ ನೆಲೆಯಲ್ಲಿ ಅರ್ಥೈಸುವ ಪ್ರಯತ್ನ ಈ ಕಾದಂಬರಿ. ಕಾದಂಬರಿಯ ಉದ್ದಕ್ಕೂ ವಾಸ್ತವದ ಒಂದು - ಕೆಳ - ಹಂತದ ಚಿತ್ರಣ ಹರಿಯುತ್ತಾ ಕಡೆಯಲ್ಲಿ ಅದೇ ವಾಸ್ತವದ ಮೇಲಿನ ಹಂತಕ್ಕೆ ಜಿಗಿದು ಮುಕ್ತಾಯವಾಗುತ್ತದೆ. ಬಿಡುಗಡೆ ಎಲ್ಲ ಪರರ ಹಿತದೊಂದಿಗೆ ತನ್ನದು ಮಿಳಿತವಾದಾಗಲೇ ಎಂಬುದ ತೋರಿಸುತ್ತ ಸ್ವೇಚ್ಛೆಯನ್ನು ಹಿಂದರಿಸುತ್ತದೆ, ಸಮರ್ಥನೆ ಅವಕಾಶವೇ ಇಲ್ಲದೆ ನಿರ್ಗಮಿಸುತ್ತದೆ. 

ಸಹನಾ ಅವರ ನಿರೂಪಣೆ ಅದ್ಭುತವಾಗಿದೆ. ತುಂಬಾ ಸರಳ ಹಾಗು ಸಹಜ ಶೈಲಿಯಲ್ಲಿ ಬಹು ನಿಪುಣತೆಯಿಂದ ಕತೆಯನ್ನು ಹೆಣೆದಿದ್ದಾರೆ. ಕುತೂಹಲವನ್ನು ನಿರಂತರವಾಗಿ ಕೆರಳಿಸಿ, ಬೆಳೆಸಿ ನಮ್ಮನ್ನು ಎಳೆದುಕೊಂಡು ಹೋಗುತ್ತದೆ, ಯಾವುದೇ ಶ್ರೇಷ್ಠ ಪತ್ತೇದಾರಿ ಕಥನವನ್ನೂ  ಮೀರಿಸುತ್ತದೆ. ಒಂದೇ ಉಸಿರಿನಲ್ಲಿ ಇಡೀ ಕಾದಂಬರಿ ಓದಿಸಿಕೊಳ್ಳುವ ಛಾತಿ ಇದಕ್ಕಿದೆ. 

ಹೌದು, ಈ ಕಾದಂಬರಿಯ ವಸ್ತು ಪ್ರೀತಿ, ಪ್ರೇಮ, ದಾಂಪತ್ಯ. ಅವುಗಳ ಸೂಕ್ಷ್ಮಾತಿಸೂಕ್ಷ್ಮಗಳನ್ನು ಅತಿ ನವುರಾಗಿ ಹಿಡಿದು ನಮ್ಮ ಮುಂದಿಟ್ಟಿದ್ದಾರೆ. ಕತೆ ರಭಸ ಉದ್ವೇಗಗಳಿಂದ ಓಡುತ್ತ ನಮ್ಮನ್ನು ಕಟ್ಟಿಹಾಕುತ್ತದೆ. ಪ್ರತಿ ಕ್ಷಣವೂ ಹಲವು ವಿವರಗಳಿಂದ, ಅವುಗಳ ವಿವಿಧ ಆಯಾಮಗಳಿಂದ ಕಂಗಳಿಸುತ್ತದೆ, ಅವುಗಳಲ್ಲಿನ ಮನೊದೈಹಿಕ ವ್ಯಾಪಾರಗಳನ್ನು ಬಿತ್ತರಿಸುತ್ತದೆ. ಈ ಕಾದಂಬರಿಯ ಜೀವಾಳವೇ ನಾಯಕಿಯ ಆತ್ಮಾವಲೋಖನ. ಆದರೂ ಓದುಗನನ್ನು ಅದರಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವುದು ಈ ಕೃತಿಯ ಹಿರಿಮೆ.  

ನಾಯಕಿ ಛಲಗಾತಿ. 'ಝಾನ್ಸಿ ರಾಣಿ' ಕದನದಲ್ಲಿ ಶತ್ರುಗಳ ರುಂಡ ಚಂಡಾಡಿದರೆ ಈಕೆ ಓದಿನಲ್ಲಿ ಶ್ರೇಷ್ಠ ಅಂಕಗಳಿಸಿ ಇತರರ 'ರುಂಡ ಚಂಡಾಡುತ್ತಾಳೆ '( ಪು. ೫೧).  ಆದರೂ ಹಲವೊಮ್ಮೆ ಉತ್ಕಟ ಹಂಬಲದಿಂದ ಅಧೀರಳಾಗುತ್ತಾಳೆ. "ಕಷ್ಟವಿಲ್ಲದಿರುವುದೇ ಬೇರೆ, ಸುಖವಾಗಿರೋದೇ ಬೇರೆ" ಎಂದು ಮನಗಾಣುತ್ತಾಳೆ(ಪು. ೮೨). ಕೋದಂಡರಾಮನ ಬಿಲ್ಲು ಅವಳ ಆಂತರಿಕ ತಲ್ಲಣಕ್ಕೆ ಸಂಕೇತವಾದರೆ, ಅವನ ಅಭಯ ಹಸ್ತ ಶಾಂತಿ ದ್ಯೋತಕ, ಎರಡನ್ನು ಮಿಲಾಯಿಸಿಕೊಂಡು ಬದುಕುತ್ತಾಳೆ. ಅಸ್ತಿತ್ವದ ಆದ್ಯತೆ ಮತ್ತು ಅದು ಹೇಗೆ ಉಳಿದೆಲ್ಲವುದರ ಜೊತೆ ಕೊಂಡಿಯಾಗಿದೆ (ತಾನು ಬಯಸುವುದವರಷ್ಟೇ ಅಲ್ಲದೆ) ಎಂಬುದರ ಕಾವು ನಮಗೆ ತಟ್ಟದೇ ಹೋಗುವುದಿಲ್ಲ. 

ಉತ್ತಮ ಕಾದಂಬರಿ ನೀಡಿದ ಸಹನಾ ವಿಜಯಕುಮಾರ್ ಅವರಿಗೆ ವಂದನೆಗಳು, ಅಭಿನಂದನೆಗಳು.