ಉಳಿದ ವಿವರಗಳು ಲಭ್ಯವಿಲ್ಲ, ಕಥನ ಪರಿಪೂರ್ಣ.
ಜೋಗಿ ಅವರ ಕಥಾ ಸಂಕಲನ : ಉಳಿದ ವಿವರಗಳು ಲಭ್ಯವಿಲ್ಲ, ಅಂಕಿತ ಪುಸ್ತಕ , ೨೦೧೭.
ಈ ಕೃತಿ ಬೆಂಗಳೂರು ಬದುಕಿನ ಬಗ್ಗೆ ಜೋಗಿಯವರು ಬರೆದ ಮೂರನೆಯ ಪುಸ್ತಕ , ಇನ್ನಷ್ಟು ಬರುತ್ತದೆ ಅಂತ ಅವರೆ ಹೇಳಿದ್ದಾರೆ. ಹಲವು ವರ್ಗಗಳ-ಹೆಚ್ಚಾಗಿ ನಿಮ್ನ, ಮಧ್ಯಮ ವರ್ಗದ - ಹುಟ್ಟು, ಇರವು ಮತ್ತು ಸಾವುಗಳ ಹಂದರ ಇಲ್ಲಿದೆ. ಕಥನ ಶೈಲಿ, ಓಘ, ಜೋಡಣೆ ಮನಮುಟ್ಟುತ್ತದೆ. ಇಲ್ಲಿ ಜೋಗಿಗೆ ತುಂಬ ಅವಸರ. ಅವರು ತರುವ ಒಬ್ಬೊಬ್ಬರ ಮೇಲೂ ಒಂದು ಕಾದಂಬರಿಯನ್ನೇ ಬರೆಯಬಹುದಿತ್ತು, ಆದರೆ ಸೊಗಸಾಗಿ ಮೂರೂ ನಾಲ್ಕು ಸಾಲಿನಲ್ಲೇ ಮುಗಿಸಿ ಬಿಡುತ್ತಾರೆ. ಏಕೆಂದರೆ ಬದುಕಿನ ಎಲ್ಲ ವೈರುಧ್ಯ ಮತ್ತು ವೈವಿಧ್ಯತೆ ಬಿಚ್ಚಿಡುತ್ತಾ ಹೋಗಬೇಕು ಅವರಿಗೆ, ಯಾವುದೇ ಒಂದಕ್ಕೆ ಅಂಟಿಕೊಂಡು ನಿಲ್ಲುವ, ವ್ಯಯಿಸುವ ವ್ಯವಧಾನವಿಲ್ಲ. ಬಿಚ್ಚಿಡುತ್ತಾ ಆ ವೈವಿಧ್ಯ-ವೈರುಧ್ಯ ಗಳಲ್ಲಿನ ಸಮಾನ ಅಂಶ ಗೋಚರಿಸಿ, ಅರೆ!, ಎಲ್ಲರ ಬದುಕು ಇದೇ, ಇಷ್ಟೇ ಎಂಬ ಒಂದು ಸಂತ ಭಾವದ ಸುಳಿವು ಹಾದು ಹೋಗುವುದರಲ್ಲಿ ಸಂಶಯವಿಲ್ಲ. ಇಲ್ಲಿಯ ಜನರ ಮದುವೆ ಇತ್ಯಾದಿಗಳು ಪ್ರೀತಿ, ಪ್ರೇಮ, ಆತ್ಮೋದ್ಧಾರ ಗಳಿಗಲ್ಲ, ಅವು ಬದುಕಿನ ನೆರವಿಗೆ. ಕ್ಷಣ ಕ್ಷಣಕ್ಕೆ ಕಳಚುವ ಬಂಧನ, ಆದರೂ ಕ್ಷಣ ಕ್ಷಣಕ್ಕೆ ಬದುಕು ಕಟ್ಟಿಕೊಳ್ಳುವ ಅನಿವಾರ್ಯತೆ ಮನಕಲಕುವ ರೀತಿಯಲ್ಲಿ ನಿರೂಪಿಸಿದ್ದಾರೆ ಜೋಗಿ.
ಹಾಸ್ಯ ಲೇಪನದ ವಿಷಾದ ಪುಸ್ತಕದ ಉದ್ದಕ್ಕೂ ಸಿಗುತ್ತದೆ, ಮುದಗೊಳಿಸುತ್ತದೆ: ಮಾತು ಮಾತಿಗೆ ಗಾದೆ ಹೇಳುವ ಶಿವಲಿಂಗಯ್ಯ, ಅದರಲ್ಲೂ ಪಂಡಿತರಿಗೆ ಬೇರೆ, ಪಾಮರರಿಗೆ ಬೇರೆ ಗಾದೆಗಳು. ಮದುವೆಯ ಅರತಕ್ಷತೆಯಲ್ಲಿ ಗಜಲ್ ಗಾಯಕರು ಏರುದನಿಯಲ್ಲಿ 'ಚುಪಕೆ ಚುಪಕೆ ರಾತ್ ದಿನ್ .. ಆಂಸೂ ಬಹಾನ ಯಾದ್ ಹೈ' ಅಂತ ಹಾಡುವುದು. ಅಲ್ಲಲ್ಲಿ ಅದ್ಭುತ ಪ್ರತಿಮೆಗಳು: "ತುಳಸೀಕಟ್ಟೆಯಲ್ಲಿದ್ದ ತುಳಸೀಗಿಡ ನೀರು ಕಾಣದೇ ಸೊರಗಿ ಸೊರಗಿ, ಕೊನೆಗಾಲದ ಹರಿಭಕ್ತನಂತೆ ಮುರುಟಿಹೋಗಿತ್ತು". "ಆ ಬೆಳಕಿನ ಪಂಜರದೊಳಗೆ ನಾಲ್ಕಾರು ನೊಣಗಳು ಜ್ಞಾನೋದಯವಾದಂತೆ ಹಾರಾಡುತ್ತಿದ್ದವು."
ನಗರ ಬದುಕಿನ ಭವಣೆ ಯನ್ನು ಆಳವಾಗಿ ಸ್ಪರ್ಶಿಸುವಂತೆ ಚಿತ್ರಿಸಿ ನಮಗೊಂದು ಉತ್ತಮ ಓದು ಕೊಟ್ಟ ಜೋಗಿಗೆ ವಂದನೆಗಳು, ಅಭಿನಂದನೆಗಳು.