Thursday, January 18, 2018

Kashinath is no more

ನಟ, ನಿರ್ದೇಶಕ, ನಿರ್ಮಾಪಕ, ಸಂಗೀತ ನಿರ್ದೇಶಕ ಕಾಶೀನಾಥ ನಿಧನ.
ಒಂದು ವಿಶಿಷ್ಟ ಸಂದರ್ಭದಲ್ಲಿ ಈ ಮನೋ ವಿಜ್ಞಾನಿ ಮತ್ತು ಸಿನಿಮಾರಂಗದ ಕಾಶೀನಾಥರ ಬೇಟಿ ನನ್ನ ಮಿತ್ರ ವೈಎನ್ಕೆ ಮನೆಯಲ್ಲಿ ಆಯಿತು. ಅವರ ಒಂದು ಸಿನೆಮ - 'ಅನುಭವ' ಇರಬೇಕು - ಸೆನ್ಸಾರ್ ಬೋರ್ಡ್ ಅಶ್ಲೀಲ ಎಂದು ತಿರಸ್ಕರಿಸಿತ್ತು. ಪರಿಣಿತರ ಅಭಿಪ್ರಾಯ ಪಡೆದು ಪುನಃ ಪರಿಶೀಲಿಸಲು ಕೇಳಬೇಕೆಂದು ನಿರ್ಧರಿಸಿ ಕಾಶೀನಾಥರು ಒಬ್ಬ Expert ಗಾಗಿ ವೈಎನ್ಕೆ ಕೇಳಿದಾಗ ನನ್ನ ಹೆಸರು ಸೂಚಿಸಿದ್ದರು. ನಮಗೆ ಸಿನೆಮ ತೋರಿಸಿದರು. ನಾನು ಸುಧೀರ್ಘವಾದ ವಿವರಣೆ-ವಿಶ್ಲೇಷಣೆಗಳೊಂದಿಗೆ ನನ್ನ ಅಭಿಪ್ರಾಯ ಬರೆದು ಇದು ಅಶ್ಲೀಲ ಅಲ್ಲವೇ ಅಲ್ಲ, ಬದಲಾಗಿ ಇದು ಒಂದು ಪ್ರಮುಖ ಅನುಭವದ ನವಿರಾದ ಹಾಗೂ ಹಾಸ್ಯಲೇಪಿತ ನಿರೂಪಣೆ, ನೋಡಲು ಅತ್ಯಂತ ಸೂಕ್ತ ಸಿನೆಮ ಎಂದು ಬರೆದ ನೆನಪು. ಸೆನ್ಸಾರ್ ಮಂಡಳಿ ನನ್ನ ಅಭಿಪ್ರಾಯ ಒಪ್ಪಿಕೊಂಡು ಬಿಡುಗಡೆಗೆ ಅನುಮತಿ ಕೊಟ್ಟಿತು. ಸಿನಿಮಾದ ಶೀರ್ಷಿಕೆಯಲ್ಲಿ ನನಗೆ 'ಕೃತಜ್ಞತೆ' ಯನ್ನ ಅರ್ಪಿಸಿದ್ದರಂತೆ, ನಾನು ಮತ್ತೆ ಟಾಕೀಸ್ಗೆ ಹೋಗಿ ಆ ಸಿನೆಮ ನೋಡಿರಲಿಲ್ಲ.
ಅವರ ಸಹೃದಯತೆ, ನೇರ ನುಡಿ-ನಡೆ, ವಿನಯ ತುಂಬಾ ಇಷ್ಟವಾಗಿತ್ತು. ಅವರ ನಿಧನದ ಸುದ್ದಿ ನನ್ನ ಅವರ ಒಂದು ಒಡನಾಟದ ನೆನಪು ತಂದಿತು ಕಂಬನಿಗಳೊಡನೆ. ಅವರ ಕುಟುಂಬಕ್ಕೆ ನಷ್ಟವನ್ನು ಭರಿಸುವ ಶಕ್ತಿ ದೊರಕಲಿ. ಅವರಿಗೆ ಸದ್ಗತಿ ಸಿಗಲಿ.