ಡಾ. ಗಿರಿ ಅವರ "ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ"
ವೈಜ್ಞಾನಿಕ ತಳಹದಿಯಮೇಲೆ ಸಾಹಿತ್ಯದ ಮೀಮಾಂಸೆಯನ್ನು ಪರಿಗಣಿಸುವುದೇ ಈ ಪುಸ್ತಕದ ವಸ್ತು. ಸಾಹಿತ್ಯದ ಹುಟ್ಟು, ಸ್ವರೂಪ,
ಬೆಳವಣಿಗೆ, ಪರಿಣಾಮ, ಪ್ರತಿಫಲ (’ತಿರುಣಾಮ’), ಬರಹಗಾರ, ಓದುಗ, ವಿಮರ್ಶಕ, ಸಂಸ್ಕೃತಿ, ಮತ್ತು ಸಮಾಜ ಇವೆಲ್ಲವೂ ಇಲ್ಲಿ
ಚರ್ಚೆಗೆ ಒಳಗಾಗಿವೆ. ಈ ಕೆಲಸಕ್ಕೆ ಪರಿಮೂರ್ಣ ಯೋಗ್ಯತೆ ಗಿರಿ ಹೆಗ್ಡೆಯವರಿಗೆ ಇದೆ. ಇವರು ಸಾಹಿತಿ, ಎರಡು ಕಾದಂಬರಿಗಳು, ಒಂದು
ಭಾಷಾಂತರ (ರೂಪಾಂತರ, ಕಾಫ್‍ಕನ Metamorphisis), ಮತ್ತು ಹತ್ತಾರು ಸಣ್ಣ ಕತೆಗಳನ್ನು ಪ್ರಕಟಿಸಿ ಓದುಗರ ಮತ್ತು ವಿಮರ್ಶಕರ
ಮನ್ನಣೆ ಪಡೆದಿದ್ದಾರೆ. ವರ್ತನ ವಿಜ್ಞಾನ ಮತ್ತು ಮಾತು-ಭಾಷೆಯ ತಾರುಮಾರು ವಿಜ್ಞಾನಗಳಲ್ಲಿ (speech-language pathology)
ಅಮೇರಿಕದ ಸದರ್ನ್ ಇಲನಾಯ್ ವಿಶ್ವವಿದ್ಯಾಲಯದಲ್ಲಿ ಪಿ.ಎಚ್ ಡಿ. ಮಾಡಿ ಆಮೇಲೆ ಇಪ್ಪತ್ತಕ್ಕಿಂತ ಹೆಚ್ಚು ಪಠ್ಯ ಮತ್ತು
ವೈಜ್ಞಾನಿಕ ಪುಸ್ತಕಗಳನ್ನೂ ಹಲವಾರು ವೃತ್ತಿಪರ ನಿಯತಕಾಲಿಕ ಪತ್ರಿಕೆಗಳಲ್ಲಿ ತಮ್ಮ ಸಂಶೋಧನಾ ಲೇಖನಗಳನ್ನೂ ಪ್ರಕಟಿಸಿ, ಆ
ಕ್ಷೇತ್ರದಲ್ಲಿ ಮೂವತ್ತೈದು ವರ್ಷಗಳಮೇಲೆ ಕ್ಯಾಲಫೋರ್ನಿಯ ಸ್ಟೇಟ್ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರೂ ಸಂಶೋಧಕರೂ ಆಗಿ
ದುಡಿದಿದ್ದಾರೆ. ಅಮೇರಿಕಾಕ್ಕೆ ಹೋಗುವ ಮುಂಚೆ ಮೈಸೂರು ವಿಶ್ವವಿದ್ಯಾನಿಲಯದಿಂದ ಮನೋವಿಜ್ಞಾನದಲ್ಲಿ ಸ್ನಾತಕೋತ್ತರ
ಪದವಿ, ನಂತರ ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ವೈದ್ಯಕೀಯ ಮನೋವಿಜ್ಞಾನದಲ್ಲಿ ಪದವಿ ಪಡೆದು, ಮೈಸೂರಿನ ಅಖಿಲ ಭಾರತ
ವಾಕ್ ಶ್ರವಣ ಸಂಸ್ಥೆಯಲ್ಲಿ ಮನೋವೈಜ್ಞಾನಿಕ ಲೆಕ್ಚರರ್ ಆಗಿ ಕೆಲಸಮಾಡಿ ಮಾತಿನ ದೋಷಗಳ ಬಗ್ಗೆಯೂ ಮತ್ತು
ಸೃಜನಶೀಲತೆಯಬಗ್ಗೆಯೂ ಸಂಶೋಧನೆ ಮಾಡಿದ್ದರು. ಡಾ. ಹೆಗ್ಡೆಯವರು ಶೇಷ್ಟ ಮಟ್ಟದ ವೈಜ್ಞಾನಿಕ ಪ್ರಯೋಗಗಳಿಂದ ಸಿದ್ಧವಾದ
ವರ್ತನ ವಿಜ್ಞಾನ ಮತ್ತು ವರ್ತನ ಚಿಕಿತ್ಸೆಯಲ್ಲಿ ಪರಿಣತರು. ಹೀಗೆ, ಗಿರಿಯವರು ವಿಜ್ಞಾನ, ಭಾಷೆ, ಮತ್ತು ಸಾಹಿತ್ಯದಲ್ಲಿ ಪರಿಣತರಾಗಿ ಆ
ಕ್ಷೇತ್ರಗಳಲ್ಲಿ ಈಗಲೂ ದುಡಿಯುತ್ತಿರುವವರು. ಅವೆಲ್ಲದರ ಪರಿಶ್ರಮದ ರಸಪಾಕವೇ ಈ ಪುಸ್ತಕ.
ಕಾವ್ಯ ಮೀಮಾಂಸೆ ಪ್ರಪಂಚದಲ್ಲಿ ಇಲ್ಲಿಯವರೆಗೆ ನಡೆದುಬಂದ ದಾರಿಯ ಸ್ಥೂಲ ಪರಿಚಯ ಇಲ್ಲಿದೆ. ಭಾರತದ ಭರತಮುನಿ,
ಆನಂದವರ್ಧನ, ಅಭಿನವಗುಪ್ತರ ಆದಿಯಾಗಿ, ಕನ್ನಡದ ತೀನಂಶ್ರೀ, ಶಿವರುದ್ರಪ್ಪ, ಯಶವಂತ ಚಿತ್ತಾಲ, ಕೆ. ವಿ. ನಾರಾಯಣ
ಮುಂತಾದವರೂ ಸೇರಿದಂತೆ, ಪಡುವಣದ ಪ್ಲೇಟೊ, ಅರಿಸ್ಟಾಟ್ಲ್, ಡಾಂಟೆ, ಟಿ. ಎಸ್. ಎಲಿಯಟ್ ನಿಂದ ಫ್ರಾಯ್ಡ್, ಯೂಂಗ್,
ಅಯ್. ಎ. ರಿಚರ್ಡ್ಸ್ ಮುಂತಾದವರ ಸಾಹಿತ್ಯ ಮೀಮಾಂಸೆ ಮತ್ತು ಅವುಗಳ ಮೇಲಿನ ಹೆಗ್ಡೆಯವರ ವಿಮರ್ಶೆ ಮತ್ತು ವೈಜ್ಞಾನಿಕ
ಮರುಚಿಂತನೆ ಇಲ್ಲಿವೆ. ಮುಖ್ಯವಾಗಿ, ಅವೆಲ್ಲದರಲ್ಲೂ ಅಲ್ಲಲ್ಲಿ ವೈಜ್ಞಾನಿಕ ನೋಟ ಕಂಡುಬಂದರೂ ಒಟ್ಟಾರೆ ಅವೆಷ್ಟು
ಅವೈಜ್ಞಾನಿಕ ಎಂಬುದನ್ನು ಸ್ಪಷ್ಟವಾಗಿ ಆಧಾರಸಹಿತವಾಗಿ ವಿವರಿಸಿದ್ದಾರೆ. ಈ ಪುಸ್ತಕದ ಮತ್ತೊಂದು ಹಿರಿಮೆಯೆಂದರೆ ಇದುವರೆಗೆ
ಬಂದ ಮೀಮಾಂಸೆಗಳ ಹೊರತಾಗಿ ಹೊಚ್ಚ ಹೊಸ ವೈಜ್ಞಾನಿಕ ತಳಹದಿಯಮೇಲೆ, ಆ ದಿಸೆಯಲ್ಲಿ ಇನ್ನಷ್ಟು ಸಂಶೋಧನೆ ನಡೆಯುವ
ಅವಶ್ಯಕತೆಯನ್ನು ಒತ್ತಿ ಹೇಳುತ್ತಲೇ, ವರ್ತನ ವಿಜ್ಞಾನವನ್ನು ಸಾಹಿತ್ಯದ ಎಲ್ಲ ರಂಗಗಳಿಗೆ ಅನ್ವಯಿಸುವ ಅದ್ಭುತ ಕೆಲಸವನ್ನು
ಮಾಡಿರುವುದು. ಗಿರಿಯವರು ವೈಜ್ಞಾನಿಕ ವಿಶ್ಲೇಷಣೆಯನ್ನು ಕಾವ್ಯ, ಗದ್ಯ, ವಿಮರ್ಶೆ, ವಚನ, ಜಾನಪದ, ದಾಸ, ಮೊಹರಂ ಸಾಹಿತ್ಯ
ಪ್ರಾಕಾರಗಳಿಗೆ ವಿಸ್ತರಿಸಿ, ಸಾಹಿತ್ಯದ ರೂಪದಲ್ಲಿ ವ್ಯತ್ಯಾಸಗಳಿದ್ದರೂ ಅವನ್ನೆಲ್ಲ ಹುಟ್ಟಿಸುವ ಸೃಜನಶೀಲತೆಯ ಪ್ರಕ್ರಿಯೆಯಲ್ಲಿ
ವ್ಯತ್ಯಾಸವಿಲ್ಲ ಎಂದು ವಾದಿಸಿದ್ದಾರೆ.
ಕನ್ನಡ ಸಾಹಿತ್ಯ ಮೀಮಾಂಸೆಗೆ, ವರ್ತನ ವಿಜ್ಞಾನದ ಪ್ರಯೋಗಗಳಿಂದ ಮತ್ತು ಅವುಗಳನ್ನು ವರ್ತನೆಯ ಬದಲಾವಣೆಗೆ ಯಶಸ್ವಿಯಾಗಿ
ಉಪಯೋಗಿಸಿದ ಅನುಭವದಮೇಲೆ ಹೊಸ ಅರ್ಥವನ್ನು ಕೊಡುವ ಕೆಲಸವನ್ನು ಇಲ್ಲಿ ಹೆಗ್ಡೆಯವರು ಏಕಾಂಗಿಯಾಗಿ ಮಾಡಿದ್ದಾರೆ.
ಕನ್ನಡ ಕಂಡರಿಯದ ವರ್ತನ ವಿಜ್ಞಾನದ ಪುರಾವೆಗಳಿಂದ ಕನ್ನಡ ಸಾಹಿತ್ಯ ಅರಿಯತೊಡಗಿದಾಗ ಅದಕ್ಕೆ ಹಿಂದೆಂದೂ ಇಲ್ಲದ ಭಾಷೆ-
ಪರಿಭಾಷೆಗಳನ್ನು ನಿರ್ಮಿಸಿಕೊಂಡು ನಮಗೆ ಸಮರ್ಥವಾಗಿ ಮನದಟ್ಟು ಮಾಡಿದ್ದಾರೆ. ಬಲಿಸುಗಗಳು, ಇಳಿಸುಗಗಳು, ತಿರುಣಾಮ,
ಆಗುಗಲಿಕೆ, ಮಾಡುಗಲಿಕೆ, ಮಾರುಲಿಗಳು, ಕೋರುಲಿಗಳು, ಪೇಳುಲಿಗಳು, ಕಾರುಲಿಗಳು, ಬರೆಪೋದುಗಳು ಎಂಬ ಮತ್ತು ಇನ್ನೂ
ಹಲವಾರು ಪದಗಳನ್ನು ಸೃಷ್ಟಿಸಿ ಕನ್ನಡದಲ್ಲಿ ಒಂದು ಹೊಸ ವಿಜ್ಞಾನವನ್ನು ಕಟ್ಟುವುದರ ಜೊತೆಗೆ ಅವುಗಳನ್ನು ಕನ್ನಡ ಸಾಹಿತ್ಯಕ್ಕೆ,
ಸಾಹಿತ್ಯ ಮೀಮಾಂಸೆಗೆ ಅನ್ವಯಿಸಿ ಹಲವಾರು ಕನ್ನಡ ಪದ್ಯ, ಗದ್ಯಗಳ ಉದಾಹರಣೆಯೊಂದಿಗೆ ವಿವರಿಸಿದ್ದಾರೆ. ತೀನಂಶ್ರೀ, ದ. ರಾ.
ಬೇಂದ್ರೆ, ಗೋಪಾಲಕೃಷ್ಣ ಅಡಿಗ, ಜಿ. ಎಸ್. ಶಿವರುದ್ರಪ್ಪ, ಜಿ. ಎಚ್. ನಾಯಕ, ಕೆ. ವಿ. ನಾರಾಯಣ, ಗಿರಡ್ದಿ ಗೋವಿಂದರಾಜ,
ಯಶವಂತ ಚಿತ್ತಾಲ, ಅನಂತಮೂರ್ತಿ, ಗಿರೀಶ್ ಕಾರ್ನಾಡ, ವೈಎನ್ಕೆ, ಲಂಕೇಶ್, ನಿಸಾರ್ ಅಹಮದ್, ಚಂದ್ರಶೇಖರ ಕಂಬಾರ, ರಹಮತ್
ತರೀಕೆರೆ, ಪ್ರತಿಭಾ ನಂದಕುಮಾರ್, ಹಾ. ಮಾ. ಕನಕ, ಉಮಾರಾವ್, ಕೃಷ್ಣಮುರ್ತಿ ಹನೂರು, ಜ್ಯೊತಿ ಗುರುಪ್ರಸಾದ್ ಮತ್ತು ಇನ್ನೂ
ಅನೇಕರು ವರ್ತನ ವಿಜ್ಞಾನದಡಿಯಲ್ಲಿ ಮಿನುಗುತ್ತಾರೆ. ಅಲ್ಲದೆ, ಸೃಜನಶೀಲತೆ, ಸಾಹಿತಿ, ಓದುಗ, ಮತ್ತು ವಿಮರ್ಶಕರ ಬಗ್ಗೆ ಸಮಗ್ರ
ಹಾಗೂ ಪ್ರೌಢ ವಿಶ್ಲೇಷಣೆಯನ್ನೂ ಕಾಣಬಹುದು. ಇಲ್ಲಿಯವರೆಗಿನ ಕಾವ್ಯ ಮೀಮಾಂಸೆಯಲ್ಲಿ ಹುದುಗಿದ ಎಷ್ಟೋ ಸಂದಿಗ್ಧತೆ,
ಸಂದೇಹ, ಮತ್ತು ಅಸ್ಪಷ್ಟತೆಗಳನ್ನು ಈ ವಿಜ್ಞಾನದಿಂದ ನಿವಾರಣೆಯಾಗುವುದರ ಜೊತೆಗೆ ಅಲ್ಲಿಯ ಹಲವು ಕ್ಲಿಷ್ಟ
ವಿಷಯಗಳನ್ನು—ರಸ, ಧ್ವನಿ ವಿಚಾರದಲ್ಲೂ—ಬಹಳಷ್ಟು ಸರಳ ಹಾಗೂ ನಿಖರವಾಗುವುದನ್ನು ತೋರಿಸಿಕೊಟ್ಟಿದ್ದಾರೆ. ಜೊತೆಗೆ
ರಸ-ಧ್ವನಿ ಸಿದ್ಧಾಂತಗಳ ಕೊರೆತೆಯನ್ನು ತೋರಿಸಿ ಆ ಸಿದ್ಧಾಂತಗಳನ್ನು ವೈಜ್ಞಾನಿಕವಾಗಿ ಪರಿಷ್ಕರಿಸಿದ್ದಾರೆ.
ಈ ಸಂದರ್ಭದಲ್ಲಿ ಒಂದು ಅಚ್ಚರಿಯ ವಿಚಾರವೆಂದರೆ ವರ್ತನ ವಿಜ್ಞಾನದಲ್ಲಿ ಮನಸ್ಸಿಗೆ ಸ್ಥಾನವಿಲ್ಲ, ಮನಸ್ಸೆಂಬುದೇ ಇಲ್ಲ, ಆ
ಪರಿಕಲ್ಪನೆ ಅನಾವಶ್ಯ ಕೂಡ ಎಂದು ಹೆಗ್ಡೆಯವರು ತೋರಿಸಿಕೊಡುತ್ತಾರೆ. “ಮನಸ್ಸು ಮನುಷ್ಯರ ಸೊಕ್ಕು ಸವಾರಿಮಾಡುವ ಕತ್ತೆ,”
ಎಂದಿದ್ದಾರೆ. ಏನೆಲ್ಲವನ್ನು ಮನಸ್ಸಿಗೆ ಆರೋಪಿಸಿತ್ತೇವೆಯೋ—ಸಾಹಿತ್ಯದ ಮೂಲ ರೂಪ, ಸಾಹಿತಿಯ ಪ್ರತಿಭೆ, ರಸ, ಭಾವ, ಧ್ವನಿ,
ಸೃಜನಶೀಲತೆಯ ಪ್ರಕ್ರಿಯೆ—ಇತ್ಯಾದಿ ಯಾವುವೂ ಮನಸ್ಸಿನಲ್ಲಿರುವುದಲ್ಲ, ಅವೆಲ್ಲವೂ ಹೊರಗಿನ ಪ್ರಪಂಚದ ಪ್ರಚೋದನೆಗಳಿಗೆ,
ವ್ಯಕ್ತಿಗಳ ಕಲಿಕೆಯ ಇತಿಹಾಸದ ಪರಿಣಾಮವಾಗಿ, ಹೊಮ್ಮುವ ಪ್ರತಿಕ್ರಿಯೆಗಳು; ಆ ಪ್ರತಿಕ್ರಿಯೆಗಳ ಪರಿಣಾಮ ಫಲಿತಾಂಶಗಳು ಸಾಹಿತ್ಯ
ರಚನೆಯೂ ಸೇರಿದಂತೆ ಎಲ್ಲಾ ವರ್ತನೆಗಳಿಗೆ ಕಾರಣ. ಮನಸ್ಸೆಂಬು ಇಲ್ಲ, ಅದು ಭ್ರಮೆ (Mind is a myth) ಎಂದು ಕೆಲವು
ದಾರ್ಶನಿಕರು (ಉದಾ: ಯು. ಜಿ. ಕೃಷ್ಣಮೂರ್ತಿ-- ಯುಜಿಕೆ) ಹೇಳಿದ್ದುಂಟು. ಆದರೆ, ಕನ್ನಡದ ಸದಂರ್ಭದಲ್ಲಿ, ಅದರಲ್ಲೂ ಕನ್ನಡ
ಸಾಹಿತ್ಯದ ಸಂದರ್ಭದಲ್ಲಿ ಇದೇ ಮೊದಲೆನ್ನಬಹುದು.
ಗಿರಿಯವರ ಈ ಕೃತಿ ಕನ್ನಡಕ್ಕೆ ಅತ್ಯಂತ ವಿಶಿಷ್ಟ ಹಾಗೂ ವಿನೂತನ ಕೊಡುಗೆ. ಬದುಕು, ಭಾಷೆ, ಸಾಹಿತ್ಯ, ಮತ್ತು ಸಂಸ್ಕೃತಿ ಬಗ್ಗೆ
ಹೊಚ್ಚ ಹೊಸ, ವೈಜ್ಞಾನಿಕ ನೋಟವನ್ನು ಬಿರುತ್ತ, ಅದರ ಹೆಚ್ಚಿನ ಉಪಯುಕ್ತತೆ, ಸಾರ್ಥಕತೆಯೆಡೆಗೆ ನಮ್ಮನ್ನು ಕರೆದೊಯ್ಯುತ್ತಾರೆ.
ಡಾ. ತಿಮ್ಮಪ್ಪನವರ ಹಿನ್ನುಡಿ.
LikeShow More Reactions
Comment
s
Comments
Thimmappa Manchale Suryanarayanarao
Write a comment...